ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಯಕ್ಷಗಾನ ಯಾನ: ಇದು ವೃತ್ತಿ ಮೇಳಗಳ ಜೈತ್ರಯಾತ್ರೆ

ಲೇಖಕರು : ಯಶೋಧರ ಕೋಟ್ಯಾನ್, ಮೂಡುಬಿದಿರೆ
ಸೋಮವಾರ, ನವ೦ಬರ್ 24 , 2014
ಅದು ಅಕ್ಷರಶಃ ದಿಗ್ವಿಜಯ. ಕಲಾ ಪ್ರಕಾರವೊಂದನ್ನು ಮನೆಮನೆಗೆ ಜನರಿದ್ದಲ್ಲಿಗೆ ತೆಗೆದುಕೊಂಡು ಹೋಗುವ ಯಾತ್ರೆ. ಇದೀಗ ಯಕ್ಷಗಾನ ಮೇಳಗಳ ತಿರುಗಾಟದ ಕಾಲ. ಕಲಾವಿದರು ದೇವಾನುದೇವತೆ, ರಾಜ ಮಹಾರಾಜರ ಪೋಷಾಕು ತೊಟ್ಟು ರಂಗಸ್ಥಳದಲ್ಲಿ ಒಡ್ಡೋಲಗ ಮಾಡುವ ಪರ್ವಕಾಲ.

ಕಮಲಶಿಲೆ ಮೇಳದ ವಾಹನಗಳು
ಹೌದು, ಇದೇ ಯಕ್ಷಗಾನ ಯಾನ. ಕಾರ್ತಿಕ ಮಾಸದ ಚುಮುಚುಮು ಚಳಿಯಲ್ಲಿ ಶುರುವಾಗುವ ಇವರ ಆಟ-ತಿರುಗಾಟ ಕೊನೆಗೊಳ್ಳುವುದು ಮುಂಗಾರು ಮಳೆಯ ಹನಿಗಳ ಸಿಂಚನವಾಗುವ ಕೆಲವೇ ದಿನಗಳ ಹಿಂದೆ. ಮನೆ, ಹೆಂಡತಿ ಮಕ್ಕಳನ್ನು ಬಿಟ್ಟು ಜೀವನದ ಬಂಡಿ ಸಾಗಿಸುವ ಸಲುವಾಗಿ ಕಾಲಿಗೆ ಗೆಜ್ಜೆ ಕಟ್ಟಿ ಯಕ್ಷಗಾನ ಆಖ್ಯಾನಗಳನ್ನು ಪ್ರದರ್ಶಿಸುವ ಸಮಯ. ಕಲಾವಿದರಿಗೆ ಇಲ್ಲಿ ಒಂದಷ್ಟು ದಿನಗೂಲಿ ಸಿಗುವುದರ ಜತೆಗೆ ತಾವೊಬ್ಬ ಕಲಾವಿದನೆಂದು ಜನ ಗುರುತಿಸುತ್ತಾರೆಂಬ ಖುಷಿ. ಯಕ್ಷಗಾನದ ಮೂಲಕ ಕಲಾಸೇವೆ ಮಾಡುತ್ತೇವೆನ್ನುವ ಸಾರ್ಥಕ್ಯ.

ನಿಜ ಜೀವನದಲ್ಲಿ ಬದುಕಿಗಾಗಿ ಹೆಣಗಾಡುವ ಕಲಾವಿದರು ರಂಗಸ್ಥಳದಲ್ಲಿ ರಾಜನಾಗಿ, ಮಂತ್ರಿಯಾಗಿ, ದೇವಿಯಾಗಿ, ದೇವತೆಯಾಗಿ ಮೆರೆಯಲು ರಂಗ ಹತ್ತಿದ್ದಾರೆ. ಮುಂದಿನ ಮೇ ತಿಂಗಳವರೆಗೆ ಈ ತಿರುಗಾಟ ಭರ್ಜರಿಯಾಗಿ ನಡೆಯಲಿದ್ದು, ಹತ್ತಾರು ಮೇಳಗಳ ಸಾವಿರಾರು ಕಲಾವಿದರು ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳೂ ಸೇರಿದಂತೆ ನಾಡಿನಲ್ಲಿ ಯಕ್ಷಗಾನದ ಗತ್ತು ಗೈರತ್ತನ್ನು ಮಾರ್ದನಿಸಲಿದ್ದಾರೆ.

ಸಂಜೆ ಸೂರ್ಯ ಮುಳುಗಿದನೆಂದರೆ ಸಾಕು ಅಲ್ಲಲ್ಲಿ ಚಂಡೆ-ಮದ್ದಳೆಗಳ ಅಬ್ಬರದ ತಾಳ ಕೇಳಿ ಬರುತ್ತದೆ. ಇಲ್ಲಿ ಇಂದು ರಾತ್ರಿ ಯಕ್ಷಗಾನ ಪ್ರದರ್ಶನ ಇದೆ ಎಂದು ಊರಿಗೆ ಸಾರಿ ಹೇಳುವ ಸಂಪ್ರದಾಯವಿದು. ವಿಶಾಲವಾದ ಗದ್ದೆ ಅಥವಾ ಮೈದಾನದ ಒಂದು ಭಾಗದಲ್ಲಿ ರಂಗಸ್ಥಳ ನಿರ್ಮಾಣವಾಗುತ್ತದೆ. ಅಲ್ಲಿ ರಾತ್ರಿಯಿಡೀ ಬಯಲಾಟ ನಡೆಯುತ್ತದೆ. ಊರವರೆಲ್ಲ ನಿದ್ದೆ ಬಿಟ್ಟು ಈ ಯಕ್ಷಗಾನದ ಸೊಗಸನ್ನು ಅನಾದಿ ಕಾಲದಿಂದಲೂ ನೋಡುತ್ತಲೇ ಇದ್ದಾರೆ. ಆದರೆ ಆಧುನಿಕತೆಯ ಗಾಳಿಯಲ್ಲಿ ಯಕ್ಷಗಾನ ವೀಕ್ಷಕರ ಸಂಖ್ಯೆ ಕಡಿಮೆಯಾಗುತ್ತಿರುವುದನ್ನೂ ಅಲ್ಲಗಳೆಯಲಾಗದು. ಆದರೂ ಯಕ್ಷಗಾನ ಪ್ರದರ್ಶನಗಳ ವೈಭವಕ್ಕೆ ಸಾಟಿಯೇ ಇಲ್ಲ . ಗ್ರಾಮೀಣ ಸೊಗಡಿನಲ್ಲಿ ಸಂಪ್ರದಾಯದ ಚೌಕಟ್ಟಿನಲ್ಲಿ ಯಕ್ಷಗಾನವೆಂಬ ಪ್ರದರ್ಶಕ ಕಲೆ ವಿಶ್ವದಾದ್ಯಂತ ಪ್ರಚಲಿತ.

ಚೌಕಿಯಲ್ಲಿ ಬಣ್ಣಗಾರಿಕೆಯಲ್ಲಿ ನಿರತರಾಗಿರುವ ಕಲಾವಿದರು
ಸಾಮಾನ್ಯವಾಗಿ ದೇವಸ್ಥಾನಗಳಿಗೆ ಸಂಬಂಧಿಸಿದ ಮೇಳಗಳದು ಹರಕೆಯಾಟವೇ ಹೆಚ್ಚು. ಇವೆಲ್ಲ ಉಚಿತ ಪ್ರದರ್ಶನ. ಒಂದಷ್ಟು ವೃತ್ತಿ ಮೇಳಗಳು ನಡೆಸುವ ಆಟಗಳಿಗೆ ಟಿಕೆಟ್ ಖರೀದಿಸಬೇಕು. ಪೌರಾಣಿಕ ಪ್ರಸಂಗಗಳನ್ನು ಹಾಗೂ ಕ್ಷೇತ್ರ ಮಹಾತ್ಮೆ ಪ್ರಸಂಗಗಳನ್ನು ಪ್ರತೀ ವರ್ಷವೂ ಆಡಲಾಗುತ್ತಿದ್ದರೂ ಅವುಗಳನ್ನು ನೋಡುವವರಿಗೇನೂ ಕೊರತೆ ಇಲ್ಲ. ಕೆಲವೊಂದು ಬಾರಿ ಸಂಪ್ರದಾಯದ ಮೇರೆ ಮೀರದೆ ಮಾಡರ್ನ್ ಮಂದಿಯ ಆಕರ್ಷಣೆ ಮಾಡಲು ಪಾತ್ರಗಳ ಪೋಷಾಕುಗಳನ್ನು ಬದಲಿಸಿ ಪ್ರದರ್ಶನ ಕೊಡುವುದು ಇತ್ತೀಚೆಗೆ ಶುರುವಾಗಿದೆ.

ಗೆಜ್ಜೆ ಪೂಜೆ

ಕಲಾವಿದರು ತಿರುಗಾಟದ ಮೊದಲ ದಿನ ಗೆಜ್ಜೆ ಕಟ್ಟುವ ಸಂಪ್ರದಾಯ ಮೇಳ ಮೊದಲಿನಿಂದಲೂ ನಡೆದುಕೊಂಡು ಬಂದಿರುವಂಥದ್ದು . ಇಲ್ಲಿ ಗೆಜ್ಜೆ ಪೂಜೆ ಎಂದರೆ ಕೆಲವರಿಗೆ ಯಕ್ಷಗಾನದ ಅರಂಗೇಟ್ರಂ ಕೂಡ ಹೌದು. ಮಕ್ಕಳು ಕ್ಷೇತ್ರದ ಅಧಿದೇವರ ಎದುರು ಗೆಜ್ಜೆ ಕಟ್ಟುವ ಮೂಲಕ ಕಲಾಸೇವೆಗೆ ಶುರುವಿಟ್ಟುಕೊಳ್ಳುತ್ತಾರೆ. ಬಯಲಾಟ ಪ್ರದರ್ಶನಕ್ಕೆ ಇದು ಸರಿಯಾದ ಸಮಯ. ಏಕೆಂದರೆ ನವೆಂಬರ್‌ನಿಂದ ಮಾರ್ಚ್ ತಿಂಗಳವರೆಗೂ ಮಳೆಯ ಕಿರಿಕಿರಿ ಇರುವುದಿಲ್ಲ. ಜತೆಗೆ ಜಾತ್ರೆ-ಉತ್ಸವಗಳೂ ನಡೆಯುವುದು ಇದೇ ಅವಧಿಯಲ್ಲಿ .

ಪಾಂಡವಾಶ್ವಮೇಧ

ತಿರುಗಾಟದ ಮೊದಲ ಒಂದೆರಡು ದಿನ ಆಯಾ ಕ್ಷೇತ್ರಗಳಲ್ಲಿಯೇ ಯಕ್ಷಗಾನ ಪ್ರದರ್ಶನವಿರುತ್ತದೆ. ಯಾವುದೇ ಕ್ಷೇತ್ರಗಳ ಮೇಳವಿರಲಿ ದಿಗ್ವಿಜಯ ಅಥವಾ ಅಶ್ವಮೇಧದಂಥ ಕಥೆಯನ್ನೇ ಪ್ರದರ್ಶಿಸಲಾಗುತ್ತದೆ. ತಿರುಗಾಟ ಎಂದರೆ ಒಂದು ರೀತಿಯಲ್ಲಿ ಕ್ಷೇತ್ರ ದೇವತೆಯ ದಿಗ್ವಿಜಯ ಯಾತ್ರೆ. ಅದಕ್ಕಾಗಿಯೇ ಕೆಲವು ಮೇಳಗಳು ಪಾಂಡವಾಶ್ವಮೇಧ ಅಥವಾ ರಾಮಾಶ್ವಮೇಧಂಥ ಪ್ರಸಂಗಗಳನ್ನು ಆಡುತ್ತಾರೆ. ದೇವರು ದಿಗ್ವಿಜಯ ಹೊರಡುವುದಕ್ಕೆ ಸಾಂಕೇತಿಕವಾಗಿ ಈ ಪ್ರಸಂಗ ಹೆಚ್ಚು ಸೂಕ್ತ. ಅಶ್ವಮೇಧ ಯಾಗದ ಕುದುರೆಯು ನಾಡಿನಾದ್ಯಂತ ಸಂಚರಿಸಿ ಅಲ್ಲಿನ ಆಳರಸರನ್ನು ಸೋಲಿಸಿ ಕಪ್ಪ ಕಾಣಿಕೆಗಳನ್ನು ಸಂಗ್ರಹಿಸುವ ಕಥೆ ಇದು. ಹೀಗಾಗಿ ದೇವರು ಕೂಡ ತನ್ನ ಭಕ್ತರನ್ನು ಯಕ್ಷಗಾನ ಸೇವೆಯ ಮೂಲಕ ಆಶೀರ್ವದಿಸಲು ತಿರುಗಾಟ ನಡೆಸುತ್ತಾರೆನ್ನುವುದನ್ನು ಪಾಂಡವಾಶ್ವಮೇಧ ಪ್ರಸಂಗ ಪ್ರತಿನಿಧಿಸುತ್ತದೆ ಅಂತಾರೆ ಯಕ್ಷಗಾನ ವಿದ್ವಾಂಸರು.

ಹರಕೆಯ ಆಟ

ಕುಂದಾಪುರ ಮತ್ತು ಉಡುಪಿ ತಾಲೂಕಿನಲ್ಲಿ 12ಕ್ಕೂ ಹೆಚ್ಚು ಮೇಳಗಳಿವೆ.ಮಂದಾರ್ತಿ, ಅಮೃತೇಶ್ವರೀ, ಗೋಳಿಗರಡಿ, ಸಾಲಿಗ್ರಾಮ, ಪೆರ್ಡೂರು, ಮಾರಣಕಟ್ಟೆ, ಸೌಕೂರು, ಹಾಲಾಡಿ, ಕಮಲಶಿಲೆ, ಮಡಾಮಕ್ಕಿ, ಬಗ್ವಾಡಿ, ಆಜ್ರಿ ಮೇಳಗಳು ಈ ಭಾಗದಲ್ಲಿ ಕಾರ್ಯನಿರ್ವಹಿಸುವುದರಿಂದ ಯಕ್ಷಗಾನದ ರಿಂಗಣ ಆಟ ಪ್ರಿಯರಲ್ಲಿ ಸಂಚಲನ ಮೂಡಿಸುತ್ತದೆ. ತೆಂಕಣದಲ್ಲಿ ಧರ್ಮಸ್ಥಳ, ಕಟೀಲು, ಹೊಸನಗರ, ಸುಂಕದಕಟ್ಟೆ ಸೇರಿದಂತೆ ಹಲವಾರು ಮೇಳಗಳು ಕಲೆಯ ರಸದೌತಣ ಉಣಬಡಿಸಲು ಹೊರಟಿವೆ. ಹೆಚ್ಚಿನ ಮೇಳಗಳು ದೇವಾಲಯಗಳಿಂದ ನಡೆಸಲ್ಪಡುವಂಥದ್ದು.

ಕಟೀಲು ಮೇಳದ ರ೦ಗಸ್ಥಳ
ಯಕ್ಷಗಾನ ಮೇಳಗಳಿಗೆ ಹರಕೆಯಾಟಗಳೇ ಜೀವಾಳ. ಕಟೀಲು, ಮಂದರ್ತಿ, ಧರ್ಮಸ್ಥಳ, ಸಾಲಿಗ್ರಾಮ, ಪೆರ್ಡೂರು, ಸುಂಕದಕಟ್ಟೆ, ಸಸಿಹಿತ್ಲು , ಹೊಸನಗರ , ಹಿರಿಯಡ್ಕ, ಸೌಕೂರು, ಮಡಾಮಕ್ಕಿ, ಹಾಲಾಡಿ, ಅಮೃತೇಶ್ವರಿ ಮುಂತಾದ ಧಾರ್ಮಿಕ ಕ್ಷೇತ್ರಗಳ ಯಕ್ಷಗಾನ ಮೇಳಗಳೆಂದರೆ ಅವುಗಳ ಮೇಲೆ ಜನರಿಗೆ ಇರುವ ಗೌರವ, ಶ್ರದ್ಧೆ ಅಪಾರ. ಕಟೀಲು ಮತ್ತು ಮಂದರ್ತಿ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳಗಳು ಅಪರೂಪದಲ್ಲಿ ಅಪರೂಪ. ಇಲ್ಲಿ ಕ್ರಮವಾಗಿ ಆರು ಮತ್ತು ಐದು ಮೇಳಗಳಿರುವುದು ಹೆಗ್ಗಳಿಕೆ.

ಒಂದೇ ಕ್ಷೇತ್ರದಲ್ಲಿ ಆರು ಯಕ್ಷಗಾನ ಮೇಳವಿರುವುದು ಸಣ್ಣ ವಿಷಯವೇನಲ್ಲ. ಅಂದರೆ ಅಷ್ಟೊಂದು ಸಂಖ್ಯೆ ಸೇವೆಯ ಆಟಗಳು ಬಾಕಿ ಉಳಿದಿರುತ್ತವೆ. ಜತೆಗೆ ಪ್ರತೀ ವರ್ಷವೂ ಹರಕೆ ಆಟಗಳ ಸಂಖ್ಯೆ ಹೆಚ್ಚುತ್ತಲೇ ಇರುತ್ತದೆ. ಅಚ್ಚರಿಯ ಸಂಗತಿ ಎಂದರೆ ಕಟೀಲು ಮೇಳದ ಯಕ್ಷಗಾನ ಸೇವೆ ಮಾಡಿಸಿಕೊಳ್ಳಬೇಕೆಂದರೆ 32 ವರ್ಷ ಕಾಯಬೇಕು. ಅಂದರೆ, ಈ ವರ್ಷ (2014ರಲ್ಲಿ) ಆಟ ಬುಕ್ ಮಾಡಿದರೆ 2046ರಲ್ಲಿ ನಿಮ್ಮ ಸರದಿ ಬರುತ್ತದೆ! ಮಾರಣಕಟ್ಟೆಯಲ್ಲಿ ಎರಡು ಮೇಳಗಳಿವೆ. ಒಂದು ಯಕ್ಷಗಾನದ ತಂಡವೆಂದರೆ ಸುಲಭದ ಮಾತಲ್ಲ . ಹಿಮ್ಮೇಳದವರು, ಕಲಾವಿದರು, ಸಹಾಯಕರು ಸೇರಿದಂತೆ ಕಡಿಮೆ ಎಂದರೂ 50-60 ಮಂದಿಯ ತಂಡವದು.

ಪತ್ತನಜೆ

ಹೀಗೆ ದಿಗ್ವಿಜಯ ಹೊರಟ ಮೇಳಗಳು ಒಳಗಾಗುವುದನ್ನು , ಅಂದರೆ ಕಾರ‌್ಯಕ್ರಮವನ್ನು ಕೊನೆಗೊಳಿಸುವುದಕ್ಕೆ ಪತ್ತನಜೆ ಎಂದು ಹೆಸರು. ಇದು ಸುಮಾರು ಮೇ ತಿಂಗಳ ಕೊನೆಗೆ ಬರುತ್ತದೆ. ಕಟ್ಟಿದ ಗೆಜ್ಜೆಯನ್ನು ತೆಗೆದಿರಿಸಿದ ಬಳಿಕ ಮತ್ತೆ ಮೇಳ ಹೊರಡುವುದು ಮತ್ತೊಂದು ದಿಂಡ್‌ಗೆ. ದಿಂಡು ಎಂದರೆ ದೀಪಗಳ ಸಾಲು ಸಾಲು. ಅಂದರೆ ಲಕ್ಷ ದೀಪೋತ್ಸವ. ಜೀವನೋಪಾಯಕ್ಕಾಗಿ ಕೃಷಿ , ವ್ಯಾಪಾರ ಮತ್ತಿತರ ಉದ್ಯೋಗಗಳಲ್ಲಿ ತೊಡಗಿರುವ ಯಕ್ಷಗಾನ ಕಲಾವಿದರು ಮತ್ತೆ ಮುಖಕ್ಕೆ ಬಣ್ಣ ಹಚ್ಚಲು ಸಿದ್ಧರಾಗಿರುತ್ತಾರೆ. ಕಾಲಿಗೆ ಗೆಜ್ಜೆ ಕಟ್ಟುತ್ತಾರೆ. ಮತ್ತದೇ ದೇವಾನುದೇವತೆಗಳು, ರಾಜ-ಮಹಾರಾಜರ ಪೋಷಾಕು ಧರಿಸಿ ರಂಗದಲ್ಲಿ ಮೆರೆಯುತ್ತಾರೆ. ಇದೇ ಅಲ್ಲವೆ ಕಲಾವಿದರ ಯಕ್ಷಗಾನ ಜೀವನ ಯಾನ !

**********************

























ಕೃಪೆ : http://vijaykarnataka.net


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ